ಪ್ಯಾಲಿಯೊತೀರಿಯಮ್ 		
ಕುದುರೆಗಳ ವಿಕಾಸದ ಇತಿಹಾಸದಲ್ಲಿ ಕಂಡುಬರುವ ಒಂದು ಹಂತ. ಇಯೋಸೀನ್ ಕಾಲದಲ್ಲಿ ಯುರೋಪ್ ಖಂಡದಲ್ಲಿ ನಿಜವಾದ ಕುದುರೆಗಳಿರಲಿಲ್ಲ. ಆದರೆ ಅಲ್ಪಕಾಲ ಜೀವಿಸಿದ್ದ ಈಕ್ವಿಡೀ ಕುಟುಂಬಕ್ಕೆ ಸೇರಿದ ಕೆಲವು ಪ್ರಾಣಿಗಳು ಅಲ್ಲಲ್ಲಿ ಕಂಡು ಬರುತ್ತಿದ್ದವು. ಇವೆಲ್ಲಕ್ಕೂ ಪ್ಯಾಲಿಯೋತೀರ್‍ಗಳು ಎಂದು ಹೆಸರು. ಪ್ಯಾಲಿಯೋತೀರಿಯಮ್ ಈ ಗುಂಪಿಗೆ ಸೇರುವ ಪಳಿಯುಳಿಕೆ. ಪ್ಯಾಲಿಯೋತೀರಿಯಮನ್ನೇ ಪ್ಯಾಲಿಯೋತೀರ್‍ಗಳಿಗೆಲ್ಲ ಮಾದರಿಯನ್ನಾಗಿ ಇಟ್ಟುಕೊಂಡು ಅಧ್ಯಯನ ಮಾಡಲಾಗುತ್ತದೆ.

ಪ್ಯಾಲಿಯೋತೀರಿಯಮ್, ಅಲಿಗೋಸೀನ್ ಕಾಲದ ಪ್ರಾರಂಭದಲ್ಲಿ ಜೀವಿಸಿತ್ತು. ದೈತ್ಯ ಆಕಾರವನ್ನೂ ಕೆಲವು ವಿಶೇಷ ಗುಣಗಳನ್ನೂ ಪಡೆದಿದ್ದ. ಇದು ಖಡ್ಗಮೃಗದ ಗಾತ್ರದಲ್ಲಿತ್ತು. ಇದರ ಕಾಲ್ಬೆರಳುಗಳ ಸಂಖ್ಯೆ ಮೂರು. ಕಾಲುಗಳು ಚಿಕ್ಕದಾಗಿದ್ದರೂ ದಪ್ಪ ಇದ್ದುವು. ಮುಂದವಡೆ ಹಲ್ಲುಗಳು, ದವಡೆ ಹಲ್ಲಿನಂತೆ ಮಾರ್ಪಟ್ಟಿದ್ದವು. ದವಡೆ ಹಲ್ಲುಗಳು ಲೋಗೋಡಾಂಟ ಮಾದರಿಯಲ್ಲಿದ್ದು ನಿಜವಾದ ಕುದುರೆಗಳ ದವಡೆ ಹಲ್ಲುಗಳಿಗಿಂತ ಬೇರೆ ರೂಪದವಾಗಿದ್ದುವು. ಕೆಲವು ವಿಶೇಷ ಗುಣಗಳಿದ್ದರೂ ವಾತಾವರಣದ ಏರುಪೇರಿನಿಂದಾಗಿ ಪ್ಯಾತಿಯೋತೀರ್‍ಗಳು ಇಂದು ಅಸ್ತಿತ್ವದಲ್ಲಿ ಇಲ್ಲ. 
(ಎಸ್.ಎನ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ